ಎಜುಪ್ಲಸ್

ಕೆಲಸದ ಜತೆಯಲ್ಲಿ ಸಂಬಳ ಗಿಟ್ಟಿಸುವ ತಂತ್ರ

ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಗಳಿಗಂತೂ ಬರವಿಲ್ಲ. ಕಾರ್ಪೋರೇಟ್ ರಂಗದಲ್ಲಂತೂ ಹೊಸ ಹೊಸ ಕಂಪನಿಗಳು ಹುಟ್ಟಿಕೊಳ್ಳುತ್ತಾ ಹೊಸ ಹೊಸ ಉದ್ಯೋಗಗಳಿಗೂ ಅಡಿಪಾಯ ಹಾಕುತ್ತಾ ಹೋಗುವ ಪರಂಪರೆ ಈಗ ತಲೆ ಎತ್ತುತ್ತಿದೆ. ಆದರೆ ಇವುಗಳ ನಡುವೆ ಕೆಲಸ ಸಿಗುವ ವಿಚಾರಕ್ಕಿಂತಲೂ ಮುಖ್ಯವಾಗಿ ಈ ಕೆಲಸದಿಂದ ನೀವು ಉತ್ತಮ ಸಂಬಳ ನಿರೀಕ್ಷೆ ಇಟ್ಟುಕೊಳ್ಳುವುದು ಹೇಗೆ ಎನ್ನುವುದೇ ಈಗ ಡಾಲರ್ ಪ್ರಶ್ನೆಯಾಗಿ ಬಹಳಷ್ಟು ಉದ್ಯೋಗಿಗಳನ್ನು ಕಾಡುತ್ತಾ ಇರುತ್ತದೆ.
ಉದಾಹರಣೆಗೆ ನೀವು ಒಂದು ಕಂಪನಿಗೆ ಉದ್ಯೋಗ ಸಂದರ್ಶನದಲ್ಲಿ ಒಳ್ಳೆಯ ಅಂಕಗಳನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಕೆಲಸಕ್ಕೆ ತಕ್ಕಂತೆ ಸಂಬಳ ಪಡೆಯುವುದು ಕೂಡ ನಿಮ್ಮ ಹಕ್ಕು. ಈ ಸಮಯದಲ್ಲಿ ಕಂಪನಿಯ ಜತೆಯಲ್ಲಿ ನೀವು ಸಂಬಳ ಕುರಿತಾಗಿ ಮಾತುಕತೆಗೆ ಇಳಿಯಲೇ ಬೇಕಾಗುತ್ತದೆ. ಇಂತಹ ಸಮಯದಲ್ಲಿ ಕೆಲವೊಂದು ತಂತ್ರಗಳನ್ನು ನಿಮ್ಮ ಜತೆಯಲ್ಲಿ ಇಟ್ಟುಕೊಂಡರೆ ಗ್ಯಾರಂಟಿಯಾಗಿ ನೀವು ನಿರೀಕ್ಷೆ ಮಾಡಿದ ಸಂಬಳ ನಿಮ್ಮ ಜೇಬು ತುಂಬುತ್ತದೆ.
* ನಿಮ್ಮ ಮೌಲ್ಯವನ್ನು ಕಂಡುಕೊಳ್ಳಿ:
ಪ್ರತಿಯೊಬ್ಬ ಉದ್ಯೋಗಿ ಕೂಡ ತಾನು ಏನೂ ಅನ್ನೋದು ಅವರಿಗೆ ಗೊತ್ತಿರಲೇ ಬೇಕು. ಮುಖ್ಯವಾಗಿ ಕಂಪನಿ ಹಾಗೂ ಉದ್ಯೋಗ ಎರಡು ದೃಷ್ಟಿಕೋನದಲ್ಲೂ ತಾನು ಸಮರ್ಥನಾ..? ಎನ್ನುವ ವಿಚಾರದಲ್ಲಿ ಅರಿತುಕೊಂಡು ಮುಂದೆ ನಡೆಯಬೇಕು. ಈ ಸಮಯದಲ್ಲಿ ಕಂಪನಿಗೆ ತಾನು ಸಮರ್ಥ ಎನ್ನುವ ವಿಚಾರವನ್ನು ಸಾಬೀತುಪಡಿಸಲು ಕೆಲಸದ ವ್ಯಾಪ್ತಿಯ ಜತೆಯಲ್ಲಿ ತಮ್ಮ ವಿಶೇಷ ಸಾಮರ್ಥ್ಯಗಳನ್ನು ಕಂಪನಿಗೆ ತಿಳಿಸಬೇಕಾಗುತ್ತದೆ. ಈ ಸಮಯದಲ್ಲಿ ಕಂಪನಿ ಇದನ್ನು ಅರಿತುಕೊಂಡು ಆತನಿಗೆ ಸಂಬಳ ನಿರ್ಧಾರ ಮಾಡುತ್ತದೆ.
* ಟೈಮಿಂಗ್ ಅತೀ ಅಗತ್ಯ:
ಕಂಪನಿ ಜತೆಯಲ್ಲಿ ಕೆಲಸ ಹಾಗೂ ಸಂಬಳದ ಕುರಿತು ಮಾತುಕತೆಗೆ ಇಳಿಯುವಾಗ ಟೈಮಿಂಗ್ ಹಾಗೂ ಅದರ ಮಹತ್ವವನ್ನು ಅರಿತುಕೊಂಡು ಮುಂದೆ ಸಾಗಬೇಕು. ಇದು ಅತೀ ಅಗತ್ಯ ಎನ್ನುವುದನ್ನು ಉದ್ಯೋಗಾಂಕ್ಷಿ ಅರಿತುಕೊಂಡಿರಬೇಕು. ಉದಾಹರಣೆಗೆ ಒಂದು ಕಂಪನಿ ನಿಮಗೆ ಕೆಲಸ ಕೊಡುವಾಗ ಮನೆಯಿಂದ ಕಚೇರಿಗೆ ಬರಲು ಕಾರು ಬೇಕು ಎನ್ನುವ ಬೇಡಿಕೆ ಇಡುವುದು ಸರಿಯಲ್ಲ. ಆದರೆ ಕಂಪನಿ ಈಗಾಗಲೇ ಇಂತಹ ವ್ಯವಸ್ಥೆ ಇಟ್ಟುಕೊಂಡಿದ್ದಾರೆ ಕಚೇರಿ ಹಾಗೂ ಮನೆಯ ನಡುವೆ ಅಂತರ ಜಾಸ್ತಿಯಿದ್ದು ರಾತ್ರಿ ವೇಳೆ ಸಂಚಾರ ಮಾಡಲು ಆಗುವುದಿಲ್ಲ . ಸರಿಯಾದ ವಾಹನ ಸಂಚಾರ ಇಲ್ಲ ಎನ್ನುವ ಸಮಯದಲ್ಲಿ ಇಂತಹ ಬೇಡಿಕೆ ಇಡಬಹುದು.
* ನಿಮಗೆ ನೀಡಿದ ಸಂಬಳ ಪ್ಯಾಕೇಜ್ ಗಮನದಲ್ಲಿಡಿ:
ಕೆಲವೊಂದು ಕಾರ್ಪೊರೇಟ್ ಕಂಪನಿಗಳು ಉದ್ಯೋಗಾಂಕ್ಷಿಗೆ ಕೆಲಸವಂತೂ ಕೊಡುತ್ತದೆ. ಆದರೆ ಸಂಬಳದ ವಿಚಾರದಲ್ಲಿ ತೀರಾ ಕಂಜೂಸ್‌ತನವನ್ನು ತೋರಿಸುತ್ತದೆ. ಆದರೆ ಇದೇ ಸಮಯದಲ್ಲಿ ಕಂಪನಿ ಉದ್ಯೋಗಿಯ ಭವಿಷ್ಯದ ನೆಲೆಯಲ್ಲಿ ಆತನಿಗೆ ಸಂಬಳದ ಜತೆಯಲ್ಲಿ ನಾನಾ ಸವಲತ್ತುಗಳನ್ನು ನೀಡುತ್ತದೆ. ಉದಾಹರಣೆಗೆ ವಸತಿ ವೆಚ್ಚ, ಆರೋಗ್ಯ ವಿಮೆ ಹೀಗೆ ನಾನಾ ರೀತಿಯ ಸವಲತ್ತುಗಳನ್ನು ನೀಡುವಾಗ ಉದ್ಯೋಗಿ ತಮ್ಮ ಸಂಬಳದ ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ಸಡಿಲಗೊಳಿಸಬೇಕಾಗುತ್ತದೆ.
* ವಿಜಯದ ಕಡೆಗೆ ನಡಿಗೆ ಅಗತ್ಯ:
ಕಂಪನಿಯೊಂದು ಕೆಲಸ ನೀಡುವಾಗ ಕೆಲಸಗಾರನ ಸಾಮರ್ಥ್ಯವನ್ನು ಕೂಡ ಪರಿಗಣಿಸುತ್ತದೆ. ಮುಖ್ಯವಾಗಿ ಕೆಲಸಗಾರ ಯಾವ ರೀತಿಯಲ್ಲಿ ಕಂಪನಿಯ ಲಾಭಕ್ಕೆ ನೆರವಾಗುತ್ತಾನೆ ಎನ್ನುವ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಸಂಬಳ ನಿಗದಿ ಮಾಡುತ್ತದೆ. ಕೆಲವೊಂದು ಸಲ ಆತನಿಗೆ ಜಾಸ್ತಿ ಬೋನಸ್, ಸಂಬಳ ಏರಿಕೆ ಇತರ ವಿಶೇಷ ಸವಲತ್ತುಗಳನ್ನು ನೀಡುವ ಕೆಲಸವನ್ನು ಮಾಡುತ್ತದೆ. ಈ ಕಾರಣಕ್ಕಾಗಿ ಕೆಲಸಗಾರ ಸದಾ ಕಾಲ ವಿಜಯದ ಕಡೆಗೆ ಹೆಜ್ಜೆ ಹಾಕುವುದು ಅಗತ್ಯ.
* ನಿಮ್ಮ ಮಿತಿಗಳು ಗೊತ್ತಿರಲಿ:
ಕಂಪನಿಯಲ್ಲಿ ಕೆಲಸ ಗಿಟ್ಟಿಸುವ ಉದ್ಯೋಗಿಗೆ ತಮ್ಮ ಇತಿಮಿತಿಗಳ ಅರಿವು ಇರಬೇಕಾಗುತ್ತದೆ. ಕಂಪನಿ ನೀಡುವ ಸಂಬಳ ಸರಿಯಾಗಿದ್ದರೂ ಕೂಡ ಇನ್ನೂ ಜಾಸ್ತಿ ಬೇಕು ಎನ್ನುವ ಮಾತಿಗೆ ಇಳಿಯುವುದು ಕೂಡ ತಪ್ಪು. ಇಂತಹ ಸಮಯದಲ್ಲಿ ಯಾವುದೇ ಮಾತಿಗೆ ಇಳಿಯದೇ ಕಂಪನಿಯ ಆಫರ್ ಒಪ್ಪಿಕೊಂಡು ಕೆಲಸದಲ್ಲಿ ಮುನ್ನಡೆಯುವುದು ಉದ್ಯೋಗಿಯ ಜಾಣ್ಮೆಯಾಗಿರುತ್ತದೆ.