ಅಡುಗೆ ಮನೆ

ರಂಜಾನ್‌ನಲ್ಲಿ ಬಿಸಿ ಬಿಸಿ ಸಮೋಸ

ಸಮೋಸಗಳಿಗೆ ಈಗ ಒಂದು ಸೀಜನ್ ಇದೆ. ಯಾಕ್ ಅಂತೀರಾ ಮುಸ್ಲಿಂ ಸಮುದಾಯದ ಪವಿತ್ರ ರಂಜಾನ್ ತಿಂಗಳು ಆರಂಭವಾಗುತ್ತಿದ್ದಂತೆ ಮತ್ತೊಂದೆಡೆ ಸಮೋಸಗಳಿಗೂ ಬೇಡಿಕೆ ಹುಟ್ಟಿಕೊಳ್ಳುತ್ತದೆ. ರಂಜಾನ್ ತಿಂಗಳಲ್ಲಿ ಹದಿನಾಲ್ಕುವರೆ ಗಂಟೆ ಉಪವಾಸವಿರುವ ಕಾರಣ ತೂಕ ಗಮನಾರ್ಹವಾಗಿ ಇಳಿಯುತ್ತದೆ ಎನ್ನುವ ನಂಬಿಕೆಯೊಂದು ಇದೆ. ಆದರೆ ನಿಜಕ್ಕೂ ಈ ಸಮಯದಲ್ಲಿ ಸಮತೋಲನ ಆಹಾರಗಳನ್ನು ಸೇವಿಸುವುದು ಅಗತ್ಯ.
ಇದಕ್ಕಾಗಿ ಕಡಿಮೆ ಕ್ಯಾಲೋರಿಗಳ, ದೇಹದಲ್ಲಿ ನಿಧಾನವಾಗಿ ಕರಗುವ ಮತ್ತು ಸ್ವಾದಿಷ್ಟವಾದ ಆಹಾರ ಅಗತ್ಯ. ಇದಕ್ಕೆ ಸಮೋಸ ಉತ್ತಮ ಆಯ್ಕೆ. ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಪೋಷಕಾಂಶಗಳಿದ್ದು ಉಪವಾಸದ ಬಳಿಕ ಬಳಲಿದ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಆದರೆ ಇಂತಹ ಐಟಂ ತಯಾರಿಸುವಾಗ ಅಡುಗೆ ಮನೆಯಲ್ಲಿ ಕೊಂಚ ಮುಂಜಾಗ್ರತೆ ಅಗತ್ಯವಾಗಿರುತ್ತದೆ. ಅದೇನಪ್ಪಾ ಅಂದರೆ ಒಲೆಯ ಉರಿ ಚಿಕ್ಕದಿದ್ದಷ್ಟೂ ಉತ್ತಮ. ಆದರೆ ಕಂದು ಬಣ್ಣ ಬರಲು ಕೊಂಚ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಎನ್ನುವ ವಿಚಾರವನ್ನು ನೆನಪಿನಲ್ಲಿಟ್ಟುಕೊಂಡು ತಯಾರಿಸಲು ಆರಂಭಿಸಿ.
ಬೇಕಿರುವ ಸಾಮಗ್ರಿಗಳು: ಮೈದಾ ಹಿಟ್ಟು: ಅರ್ಧ ಕೆಜಿ, ಬೆಣ್ಣೆ : ಮೂರು ದೊಡ್ಡ ಚಮಚ, ತುಪ್ಪ: ಮುನ್ನೂರು ಗ್ರಾಂ ಒಳಗಣ ಹೂರಣಕ್ಕಾಗಿ, ಬಿಳಿ ಎಳ್ಳು: ೧/೩ ಚಿಕ್ಕ ಚಮಚ, ಒಣದ್ರಾಕ್ಷಿ: ಅರ್ಧ ಕಪ್, ಸಕ್ಕರೆ: ರುಚಿಗೆ ಅನುಸಾರವಾಗಿ, ಕಾಯಿ ತುರಿ: ಒಂದು ಕಪ್, ಗಸಗಸೆ: ಎರಡು ದೊಡ್ಡ ಚಮಚ, ವನಿಲ್ಲಾ ಸುಗಂಧ: ಳಿ ಚಿಕ್ಕ ಚಮಚ, ಉಪ್ಪು ರುಚಿಗನುಸಾರ
ತಯಾರಿಸುವ ವಿಧಾನ: ಮೈದಾ, ಅರ್ಧದಷ್ಟು ಬೆಣ್ಣೆ ಮತ್ತು ಕೊಂಚ ಉಗುರುಬೆಚ್ಚನೆಯ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಲಸಿ ಕೊಂಚ ಹೊತ್ತು ಹಾಗೇ ಬಿಡಿ. ಹಿಟ್ಟು ಮೃದುವಾದ ಬಳಿಕ ಲಟ್ಟಿಸಿ ಅಗಲವಾದ ರೊಟ್ಟಿಗಳನ್ನು ತಯಾರಿಸಿ. ಚಾಕುವಿನಿಂದ ನಿಮಗಿಷ್ಟವಾದ ಗಾತ್ರದ ಮತ್ತು ಆಕೃತಿಯಲ್ಲಿ ಪಟ್ಟಿಗಳನ್ನು ತಯಾರಿಸಿಟ್ಟುಕೊಳ್ಳಿ. ಸಕ್ಕರೆ, ಉಪ್ಪು, ಎಳ್ಳು, ಕಾಯಿತುರಿ, ಗಸಗಸೆ ಮತ್ತು ವನಿಲ್ಲಾ ಸುಗಂಧಗಳನ್ನು ಚಿಕ್ಕ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಲಸಿ. ಕತ್ತರಿಸಿಟ್ಟಿರುವ ಪಟ್ಟಿಗಳನ್ನು ನಿಮಗಿಷ್ಟವಾದ ಆಕೃತಿಯಲ್ಲಿ ಮಡಚಿ ಪೊಟ್ಟಣದಂತೆ ಮಾಡಿಕೊಳ್ಳಿ . ಈ ಪೊಟ್ಟಣದಲ್ಲಿ ಹೂರಣವನ್ನು ತುಂಬಿಸಿ ತೆರೆದಿರುವ ಅಂಚುಗಳನ್ನು ಕೊಂಚ ನೀರು ಸವರಿ ಒತ್ತಿ ಮುಚ್ಚಿಬಿಡಿ. ಹೊರಭಾಗಕ್ಕೆ ಉಳಿದ ಬೆಣ್ಣೆಯನ್ನು ಸವರಿ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಕರಿಯಿರಿ. ನಡುನಡುವೆ ತಿರುವುತ್ತಾ ಕಂದು ಬಣ್ಣ ಬಂದ ಬಳಿಕ ಹೊರತೆಗೆದು ಟಿಶ್ಯೂ ಕಾಗದದ ಮೇಲೆ ಹರಡಿ. ತಣಿದ ಬಳಿಕ ತಿನ್ನಲು ನೀಡಿ.