ಎಜುಪ್ಲಸ್ ಜಾಬ್ ಜಂಕ್ಷನ್

ಕೆಲಸದಲ್ಲಿ ಸಂಬಳ ಹೆಚ್ಚಿಸಲು ಸಿಂಪಲ್ ಸೂತ್ರಗಳು

ಕೆಲಸ ಅಂತಾ ಪ್ರಶ್ನೆ ಬಂದಾಗ ಅಲ್ಲಿ ಸಂಬಳದ ಮಾತು ಬಂದೇ ಬರುತ್ತದೆ. ಮುಖ್ಯವಾಗಿ ಹೊಸ ಕೆಲಸ ಹುಡುಕಾಟದಿಂದ ಹಿಡಿದು ಹತ್ತಾರು ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಕೂತು ಕೆಲಸ ಮಾಡುವವರಿಗೂ ಪ್ರತಿವರ್ಷ ಸಂಬಳ ಏರಿಕೆಯಾಗಬೇಕು ಎನ್ನುವುದು ಎಲ್ಲರ ಹೆಬ್ಬಯಕೆ. ಮುಖ್ಯವಾಗಿ ಮಾರ್ಚ್ ತಿಂಗಳು ಕಳೆದು ಏಪ್ರಿಲ್ ತಿಂಗಳು ಬರುತ್ತಿದ್ದಂತೆ ಸಂಬಳದಲ್ಲಿ ಏರಿಕೆಯಾಗುತ್ತದೆ ಎನ್ನುವ ಗ್ಯಾರಂಟಿ ಮಾತುಗಳು ಕೆಲಸ ಮಾಡುವ ಕಂಪನಿಯೊಳಗೆ ಹರಿದಾಡುತ್ತಾ ಸಾಗುತ್ತದೆ.
ಈ ವರ್ಷವಾದರೂ ಕಂಪನಿ ನಮ್ಮನ್ನು ಸಿರೀಯಸ್ ಆಗಿ ಪರಿಗಣಿಸಿದೆ ಎನ್ನುವ ಆಧಾರದಲ್ಲಿ ಕಂಪನಿಯಲ್ಲಿ ದುಡಿಯುವ ಕೆಲಸಗಾರ ತನ್ನ ಮನಸ್ಸಿನೊಳಗೆ ಅಂದುಕೊಂಡು ಕೆಲಸ ಮಾಡುತ್ತಾನೆ. ಆದರೂ ಒಂದು ಕಂಪನಿಯಲ್ಲಿ ಇದ್ದಾಗ ಯಾವ ರೀತಿಯಲ್ಲಿ ಸಂಬಳವನ್ನು ಹೆಚ್ಚಿಸಿಕೊಳ್ಳಬಹುದು ಎನ್ನುವುದನ್ನು ಯಾರು ಕೂಡ ಹೇಳಿಕೊಡುವುದಿಲ್ಲ. ಅದಕ್ಕಾಗಿ ಕೆಲವು ಸಿಂಪಲ್ ಸೂತ್ರಗಳನ್ನು ನಿಮ್ಮ ಕೆಲಸದ ಜತೆಯಲ್ಲಿ ಆಳವಡಿಸಿಕೊಂಡಾಗ ಜೇಬಿಗೆ ಹೆಚ್ಚಿನ ಸಂಬಳ ಬಂದು ಬೀಳುತ್ತದೆ ಎನ್ನುವುದು ಉದ್ಯೋಗ ಮಾರುಕಟ್ಟೆಯನ್ನು ಸಿರೀಯಸ್ ಆಗಿ ಅಧ್ಯಯನ ಮಾಡಿಕೊಂಡು ಬಂದವರ ಅಭಿಪ್ರಾಯ.
* ಉದ್ಯಮರಂಗದ ಬೆಳವಣಿಗೆ, ಪ್ರಗತಿಯನ್ನು ಗಮನಿಸುವುದು:
ಒಂದು ಉದ್ಯಮ ರಂಗದ ಕಂಪನಿಯಲ್ಲಿ ನೀವು ಕೆಲಸಕ್ಕೆ ಸೇರಿಕೊಂಡರೆ ಆ ಕಂಪನಿಯ ವ್ಯಾಪಾರ, ವಹಿವಾಟುಗಳ ಮೇಲೆ ನಿಗಾ ಇಡುತ್ತಾ ಬನ್ನಿ. ಮುಖ್ಯವಾಗಿ ಕೆಲವೊಂದು ಕಂಪನಿಗಳು ವಹಿವಾಟಿನಲ್ಲಿ ಬೇಗನೆ ಏರುಗತಿ ಕಂಡರೆ ಇನ್ನೂಳಿದವು ನಿಧಾನವಾಗಿ ಏರುಗತಿಯನ್ನು ಕಾಣುತ್ತದೆ. ಇಂತಹ ಏರುಗತಿಗಳು ನಿಮ್ಮ ಕೆಲಸದ ಮೇಲೆ ಪ್ರಭಾವ ಬೀಳುತ್ತದೆ. ಕಂಪನಿ ಜೋರಾಗಿ ವಹಿವಾಟು ಮಾಡಿಕೊಂಡರೆ ಕೆಲಸಗಾರರಿಗೆ ಹೆಚ್ಚಿನ ಉದ್ಯೋಗ ಹಾಗೂ ವೇತನ ಕೂಡ ಸಾಧ್ಯವಾಗುತ್ತದೆ. ಇಂತಹ ಸಮಯದಲ್ಲಿ ವೃತ್ತಿ ಬದಲಾವಣೆಗೂ ಅವಕಾಶವಿದೆ.
* ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಿ:
ಒಂದು ಕೆಲಸದಲ್ಲಿ ಇದ್ದಾಗ ನಿಮ್ಮ ಶಿಕ್ಷಣ ಕೂಡ ಅದಕ್ಕೆ ಹೊಂದುವಂತೆ ಇರುತ್ತದೆ. ಆದರೆ ಮತ್ತೊಂದು ಕೆಲಸಕ್ಕೆ ನೀವು ಸೇರಿಕೊಳ್ಳುತ್ತೀರಿ ಎಂದಾದರೆ ಅಲ್ಲಿಗೆ ಬೇಕಾದಂತೆ ಶೈಕ್ಷಣಿಕ ಮಟ್ಟದಲ್ಲೂ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. ಈ ಕಾರಣದಿಂದ ಕೆಲಸದ ಬಿಡುವಿನಲ್ಲಿ ಶೈಕ್ಷಣಿಕವಾಗಿಯೂ ನಿಮ್ಮ ಆರ್ಹತೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಹೊಸ ಕೆಲಸದಲ್ಲಿ ಅಥವಾ ಹಳೆಯ ಕೆಲಸದಲ್ಲೂ ಭಡ್ತಿ ಪಡೆದುಕೊಂಡು ವೇತನವನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು.
* ಆದಾಯದ ಮೂಲಗಳನ್ನು ಹೆಚ್ಚಿಸುವತ್ತಾ ಗಮನವಹಿಸಿ:
ಭವಿಷ್ಯದ ಕಾಳಜಿ ಪ್ರತಿಯೊಬ್ಬ ಕೆಲಸಗಾರನಿಗೆ ಇರಬೇಕು. ಕೆಲವೊಂದು ಕಂಪನಿಗಳು ದಿಡೀರ್ ಆಗಿ ಬಾಗಿಲು ಮುಚ್ಚಿಕೊಂಡರೆ ತಕ್ಷಣ ದುಡಿಯುವ ಕೆಲಸಗಾರನಿಗೆ ಆರ್ಥಿಕ ಭದ್ರತೆ ಇರೋದಿಲ್ಲ. ಮುಖ್ಯವಾಗಿ ಇಂತಹ ಪರಿಸ್ಥಿತಿಗೆ ಅನುಗುಣವಾಗಿ ನಿಮ್ಮ ಆದಾಯ ಮೂಲಗಳು ವಿಸ್ತರಿಸಿಕೊಳ್ಳಿ. ಮುಖ್ಯವಾಗಿ ಉದ್ಯೋಗದ ಜತೆಯಲ್ಲಿ ಪಾರ್ಟ್ ಟೈಮ್ ಕೆಲಸಗಳತ್ತಾ ಮುಖ ಮಾಡಿ. ಆದರೆ ನಿಮ್ಮ ಮುಖ್ಯವೃತ್ತಿಯನ್ನು ಕಡೆಗಣಿಸಬೇಡಿ.
* ಸದಾ ಕಾಲ ಕ್ರಿಯಾತ್ಮಕವಾಗಿ ಕೆಲಸಮಾಡಿ:
ಕೆಲವೊಂದು ಸಲ ವಯಸ್ಸು ಹಾಗೂ ಕಂಪನಿಯಲ್ಲಿ ಉನ್ನತ ಸ್ಥಾನ ಮುಟ್ಟಿದ ನಂತರ ಕೆಲಸಗಾರ ಕೊಂಚ ನಿರಳತೆ ಅನುಭವಿಸುತ್ತಾ ತನ್ನ ಕೆಲಸ ಕಾರ‍್ಯಗಳಲ್ಲಿ ಅಷ್ಟೊಂದು ತನ್ಮಯತೆಯನ್ನು ಇಟ್ಟುಕೊಳ್ಳದೇ ಬೇಕಾಬಿಟ್ಟಿಯಾಗಿ ಕೆಲಸ ನಿರ್ವಹಣೆಗೆ ಇಳಿಯುತ್ತಾರೆ. ಇದು ಕೆಲಸಗಾರನ ಮುಂದಿನ ಭವಿಷ್ಯದಲ್ಲಿ ಕೊಂಚ ಎಡವಟ್ಟಿಗೆ ಕಾರಣವಾಗಿ ಬಿಡುತ್ತದೆ. ಕೆಲಸಗಾರ ಒಂದೇ ರೀತಿಯಲ್ಲಿ ನಡೆದುಕೊಳ್ಳುತ್ತಾ ಸದಾ ಕಾಲ ಕ್ರಿಯಾತ್ಮಕವಾಗಿ ಕೆಲಸ ಮಾಡಿದರೆ ಉತ್ತಮ.
* ಕೆಲಸದ ಆಯ್ಕೆಯಲ್ಲಿ ಗಮನ ಕೊಡಿ:
ಕೆಲವೊಂದು ಸಲ ನಿಮ್ಮ ಶೈಕ್ಷಣಿಕ ಆರ್ಹತೆಯ ಆಧಾರದಲ್ಲಿ ಕೆಲಸ ನೀಡುತ್ತಾರೆ. ಈ ಕಾರಣದಿಂದ ನಿಮ್ಮ ಶೈಕ್ಷಣಿಕ ವ್ಯವಸ್ಥೆಯನ್ನು ಶಾಲಾ ದಿನಗಳಲ್ಲಿ ನಿರ್ಧಾರ ಮಾಡಿಕೊಂಡು ಮುಂದೆ ಸಾಗಿ ಇದು ನಿಮ್ಮ ವೇತನ ಹೆಚ್ಚಳಕ್ಕೆ ಕಾರಣವಾಗುತ್ತದೆ.
* ಸಿಂಪಲ್ ಸೂತ್ರಗಳಿಂದ ವೇತನ ಹೆಚ್ಚಳ:
ಯಾವುದೇ ಕಂಪನಿಗೆ ಹೋದರೂ ಕೆಲಸಗಾರ ತನ್ನ ಆರ್ಹತೆಗೆ ತಕ್ಕಂತೆ ವೇತನಕ್ಕೆ ಒಪ್ಪಿಕೊಳ್ಳಬೇಕು. ಮುಖ್ಯವಾಗಿ ಕಂಪನಿಗಳು ವೇತನದಲ್ಲಿ ಚೌಕಾಸಿ ಮಾಡಲು ಮುಂದೆ ಬರುತ್ತದೆ. ಈ ಸಮಯದಲ್ಲಿ ಸದಾ ಯೋಚನೆ ಮಾಡಿಕೊಂಡು ಉದ್ಯೋಗ ಒಪ್ಪಿಕೊಂಡು ವೇತನ ಹೆಚ್ಚಿಸಿಕೊಳ್ಳಬೇಕು. ಕೆಲಸಕ್ಕೆ ಸೇರಿಕೊಂಡ ನಂತರ ನಿಮ್ಮಲ್ಲಿರುವ ಪ್ರತಿಭೆ ಹೆಚ್ಚಿಸಲು ಕಂಪನಿಗಳು ವೇದಿಕೆಯನ್ನು ಸೇರಷ್ಟಿಮಾಡಿಕೊಳ್ಳುತ್ತದೆ. ಇಂತಹ ಸಮಯದಲ್ಲಿ ಸಿಕ್ಕಿದ ಅವಕಾಶಗಳನ್ನು ಬಳಸಿಕೊಂಡು ಮುಂದೆ ಬರಬೇಕು. ಉದಾ: ಉಪನ್ಯಾಸಗಳು, ತರಬೇತಿ ಶಿಬಿರಗಳು ನಿಮ್ಮ ವೃತ್ತಿಯಲ್ಲಿ ಮಹತ್ತರ ಬದಲಾವಣೆ ತರಬಲ್ಲದು. ಮುಖ್ಯವಾಗಿ ಕೆಲಸದ ವಿಚಾರದಲ್ಲಿ ಅದಷ್ಟೂ ಕ್ರಿಯಾತ್ಮಕವಾಗಿ ಯೋಚನೆ ಮಾಡುತ್ತಾ ಕೆಲಸದಲ್ಲಿ ಗುಣಮಟ್ಟವನ್ನು ಕಾದುಕೊಂಡು ಮುಂದೆ ಹೋದರೆ ವೇತನದ ಜತೆ ಭಡ್ತಿಯೂ ಸಾಧ್ಯವಾಗುತ್ತದೆ.