ವಾಣಿಜ್ಯ ಸುದ್ದಿ

ಮಹಿಳಾ ಉದ್ಯಮಿಗಳಿಗೆ ಪ್ರತ್ಯೇಕ ಮಾರುಕಟ್ಟೆ: ಸುಷ್ಮಾ ಸ್ವರಾಜ್

ಗಟ್ಕೋಪುರ(ಮುಂಬೈ): ಆದಾಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಉತ್ಪಾದನೆ ಹಾಗೂ ಮಾರುಕಟ್ಟೆ ಜಾಲವನ್ನು ವಿಸ್ತರಿಸಲು ಮಹಿಳಾ ಉದ್ಯಮಿಗಳಿಗೆ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆಯನ್ನು ಒದಗಿಸುವ ಯೋಜನೆಯನ್ನು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹರಿಯ ಬಿಟ್ಟಿದ್ದಾರೆ.
ಬೃಹತ್ ಮಟ್ಟದಲ್ಲಿ ನಡೆಸುವ ಉದ್ಯಮಗಳ ನೀಲನಕ್ಷೆ ಸರಿಯಾಗಿ ಸಿಕ್ಕಿದರೆ ಅಂತಹ ಮಾರುಕಟ್ಟೆಗಳನ್ನು ವಾಣಿಜ್ಯ ನಗರಿ ಮುಂಬೈಯಲ್ಲಿ ಮಹಿಳೆಯರಿಗೆ ಮೀಸಲಿಡುವ ಉದ್ದೇಶ ಕೇಂದ್ರ ಸರ್ಕಾರದ್ದು.
ಮುಂಬೈಯ ಗಟ್ಕೋಪುರದಲ್ಲಿ ಮಹಿಳಾ ಸ್ವ ಸಹಾಯ ಗುಂಪಿನ(ಮಹಿಳಾ ಬಚತ್ ಗಟ್ಸ್) ಸಾವಿರಕ್ಕೂ ಅಧಿಕ ಮಹಿಳೆಯರನ್ನುದ್ದೇಶಿ ಸ್ವರಾಜ್ ಮಾತನಾಡಿದರು.
ಉದ್ಯಮ ದೃಷ್ಟಿಯಿಂದ ಸ್ವ ಸಹಾಯ ಗುಂಪುಗಳಿಗೆ ಪ್ರತ್ಯೇಕ ಮಾರುಕಟ್ಟೆಯ ಅಗತ್ಯವಿದೆ. ಇಲ್ಲಿ ಮಹಿಳೆಯರು ಮಾರಾಟ ಮಾಡುವ ವಸ್ತುಗಳಿಗೆ ಸರಿಯಾದ ನ್ಯಾಯಬದ್ಧ ಬೆಲೆ ಸಿಗಬಹುದು. ಹಲವು ಸಂದರ್ಭಗಳಲ್ಲಿ ವಸ್ತುಗಳು ಮಾರಾಟವಾಗದಿರಬಹುದು. ಮಹಿಳೆಯರು ಯಾವ ಉದ್ದಿಮೆಯನ್ನು ಆರಂಭಿಸಬೇಕು, ಎಷ್ಟು ಪ್ರಮಾಣದಲ್ಲಿ ತಯಾರು ಮಾಡಬೇಕು ಎಂಬುದನ್ನು ನಿರ್ಧರಿಸಿ ಸಚಿವೆ ನೆರೆದಿದ್ದ ಮಹಿಳೆಯರಿಗೆ ತಿಳಿಸಿದರು.
ಎರಡು ದಿನಗಳ ಮುಂಬೈ ಭೇಟಿಯಲ್ಲಿರುವ ಸಚಿವೆ ಸುಷ್ಮಾ ಸ್ವರಾಜ್,ವಾಣಿಜ್ಯೋದ್ಯಮಿಗಳು, ವಿದ್ಯಾರ್ಥಿಗಳು, ವಕೀಲರು, ವೈದ್ಯರು, ಅಲ್ಪಸಂಖ್ಯಾತ ಸಮುದಾಯದವರು, ಸಣ್ಣ ಉದ್ದಿಮೆದಾರರು, ಅಸಂಘಟಿತ ವಲಯದ ಕಾರ್ಮಿಕರು ಸೇರಿದಂತೆ ಸುಮಾರು 32 ವಿವಿಧ ವಲಯದ ಉದ್ಯೋಗದವರ ಜೊತೆ ಸಂವಾದ ನಡೆಸಲಿದ್ದಾರೆ.