ಸಂಪಾದಕೀಯ

ಯಾಕ್ ಸ್ವಾಮೀ ರಾಜ್ಯದ ಜನರಿಗೆ ಹೆಲ್ಮೆಟ್ ಭಾಗ್ಯ ಕರುಣಿಸಲಿಲ್ಲ!?

ನಮಗೆ ಯಾರು ಕೂಡ ಲಾಬಿ ನಡೆಸಿಲ್ಲ.ಅದೆಲ್ಲವೂ ವಿರೋಧ ಪಕ್ಷದವರು ಸುಖಾಸುಮ್ಮನೆ ಬೊಬ್ಬೆ ಹೊಡೆಯುತ್ತಾರೆ. ನಮಗೆ ಈಗ ಸುಪ್ರಿಂ ಕೋರ್ಟ್ ನೇರವಾಗಿ ಆದೇಶ ಕೊಟ್ಟಿದೆ. ಇದರ ಜತೆಯಲ್ಲಿ ನೆರೆಯ ರಾಜ್ಯಗಳು ಅದನ್ನು ಕಟ್ಟು ನಿಟ್ಟಾಗಿ ಮಾಡುವಾಗ ನಮಗೆ ಯಾಕೆ ಸಮಸ್ಯೆ. ರಾಜ್ಯದಲ್ಲಿ ಬೈಕ್ ಸವಾರರ ಜತೆಗೆ ಸಹ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಬೇಕು ಎಂದಿದೆ ಎಂದು ತುಂಬಾನೇ ನೀಟಾಗಿ ಕೂಲಾಗಿ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಧ್ಯಮಗಳ ಜತೆಯಲ್ಲಿ ಮಾತಿಗೆ ಇಳಿದು ಬಿಡುತ್ತಾರೆ. ಅವರ ಮಾತನ್ನು ಒಪ್ಪಲೇ ಬೇಕು.
ಕಾರಣ ಇಷ್ಟೇ ನಮ್ಮ ತಲೆ,ಜೀವದ ಪರವಾಗಿ ಅವರಿಗೆ ಕಾಳಜಿ ಬಂದಿದೆ ?! ಒಂದು ಸರಕಾರ ಜನರ ಪರವಾಗಿ ನಿಂತು ಯೋಚನೆ ಮಾಡುತ್ತಿದೆ ಎಂದಾಗ ಮತದಾನ ಮಾಡಿದ ಮತದಾರ ಖುಷಿ ಪಡಲೇಬೇಕು ಸ್ವಾಮಿ. ಅದೆಲ್ಲವೂ ಬದಿಗಿಡಿ. ಈಗ ಶ್ರೀಸಾಮಾನ್ಯನೊಬ್ಬ ಮಂತ್ರಿಯನ್ನು ಪ್ರಶ್ನೆ ಮಾಡುತ್ತಾನೆ. ಅದು ಹೀಗಿದೆ: ಮಂತ್ರಿಗಳೇ.. ಬೇರೆ ರಾಜ್ಯದವರು ಇಂತಹ ನಿಯಮ ತಂದರೆ ನಮಗೂ ಖುಷಿ. ಆದರೆ ಬೇರೆ ರಾಜ್ಯದವರು ಬಸ್ ದರವನ್ನು ಇಳಿದಾಗ ನೀವು ಬಸ್ ದರ ಇಳಿಸಿಲ್ಲ ಯಾಕೆ? ಬೇರೆ ರಾಜ್ಯದಲ್ಲಿ ಹಾಲಿನ ದರ ಕಡಿಮೆ ಇರುವಾಗ ರಾಜ್ಯದ ಹಾಲಿನ ದರ ಯಾಕೆ ಏಕ್‌ದಂ ಏರಿಕೆ ಕಂಡಿತು? ಬೇರೆ ರಾಜ್ಯದಲ್ಲಿರುವ ಮದ್ಯದ ರೇಟು ನಿಮ್ಮಲ್ಲಿ ಮಾತ್ರ ಯಾಕೆ ಜಾಸ್ತಿ? ಬೇರೆ ರಾಜ್ಯದಲ್ಲಿರುವ ಇಂಧನ ಬೆಲೆ ನಿಮ್ಮಲ್ಲಿ ಯಾಕೆ ಜಾಸ್ತಿ? ಬೇರೆ ರಾಜ್ಯದಲ್ಲಿ ಒಳ್ಳೆಯ ರಸ್ತೆಗಳಿದ್ದಾರೆ ನಮ್ಮಲ್ಲಿ ಯಾಕೆ ಇಂತಹ ರಸ್ತೆಗಳನ್ನು ಮಾಡಿಲ್ಲ? ಪದೇ ಪದೇ ಸುಪ್ರಿಂ ಕೋರ್ಟ್ ಆದೇಶವನ್ನು ಹಿಡಿದು ಮುಂದೆ ಬರುವ ತಾವು ರಾಜ್ಯದ ಇತಿಹಾಸವನ್ನು ಕೆಣಕಿ ನೋಡಿದರೆ ಎಷ್ಟು ಸುಪ್ರಿಂ ಕೋರ್ಟ್ ಆದೇಶವನ್ನು ಚಾಚು ತಪ್ಪದೇ ಪಾಲಿಸಿಕೊಂಡು ಬಂದಿದ್ದೀರಿ ಅಂತಾ ಒಂದ್ ಸಾರಿ ಹೇಳಿ ಬಿಡಿ. ಕಿವಿಯಾರೆ ಕೇಳಿ ಒಂದ್ ಸಲ ಖುಷಿ ಪಡಬಹುದು.ಇಂತಹ ಜಾಸ್ತಿಗಳ ಪಟ್ಟಿ ನಮ್ಮಲ್ಲಿ ಇನ್ನಷ್ಟು ಜಾಸ್ತಿ ಸಂಖ್ಯೆಯಲ್ಲಿ ಇದೆ. ಬರೀ ಇಷ್ಟು ಜಾಸ್ತಿಗಳಿಗೆ ನೀವು ಉತ್ತರ ಕೊಟ್ಟರೆ ಸಾಕು ಎನ್ನುವ ಪ್ರಶ್ನೆಗಳನ್ನು ಎಸೆದು ಬಿಡುವ ಕಾಲ ಬರಬಹುದು ಅಲ್ವಾ..?

ನೀವು ಹಳ್ಳಿಗಾಡಿನಲ್ಲೂ ಹೆಲ್ಮೆಟ್ ಕಡ್ಡಾಯ ಮಾಡಲೇಬೇಕು ಎನ್ನುವ ಉದ್ದೇಶ ಇಟ್ಟುಕೊಂಡಿರೋದು ಒಳ್ಳೆಯದು. ಒಂದು ವಿಚಾರ ನೀವು ನೆಪಿನಲ್ಲಿಟ್ಟುಕೊಳ್ಳಬೇಕು ದೇಶದಲ್ಲಿ ಬೈಕ್ ಖರೀದಿ ಮಾಡುವವರು ಯಾರು ಸ್ವಾಮಿ.. ಬಹಳಷ್ಟು ಸಂಖ್ಯೆಯ ಮಧ್ಯಮ ವರ್ಗದವರು. ಯಾಕ್ ಅಂತೀರಾ..? ಅವನಿಗೆ ಕಾರು ಖರೀದಿ ಮಾಡುವ ತಾಕತ್ತು ಇರೋದಿಲ್ಲ. ಜತೆಯಲ್ಲಿ ಟ್ರಾಫಿಕ್‌ಗೂ ಸಮಸ್ಯೆಯಾಗಬಾರದು ಎನ್ನುವ ಚಿಂತನೆ ಅವನಲ್ಲಿ ಸಾಕಷ್ಟು ಬೆಳೆದು ಬಂದಿರುತ್ತದೆ. ಎಲ್ಲ ಕಡೆಯಲ್ಲೂ ಸಾಲ ಮಾಡಿಕೊಂಡು ಬೈಕ್ ಖರೀದಿ ಮಾಡಿಕೊಂಡು ತನ್ನ ಹೆಂಡತಿ ಮಕ್ಕಳನ್ನು ನೆಮ್ಮದಿಯಿಂದ ಓಡಾಡಿಸುತ್ತಾ ಕಾಲ ಕಳೆಯುತ್ತಾನೆ. ಮನೆಯವರು ಕಿರಿಕಿರಿ ಮಾಡಿದಾಗಲೂ ಕಾರು ಬೇಡ ಬೈಕ್ ಸಾಕು ಕಣೇ.. ಎಂದು ಹೇಳಿಕೊಂಡು ಜಾರಿ ಬಿಡುತ್ತಾನೆ. ಅವನ ಕೀಸೆಗೆ ಒಂದು ಅಥವಾ ಎರಡು ಹೆಲ್ಮೆಟ್ ಭಾರವಾಗುವ ಪ್ರಶ್ನೆಯೇ ಇಲ್ಲ.

ಆದರೆ ನಮ್ಮ ಬಗ್ಗೆ ಸಾಕಷ್ಟು ಚಿಂತನೆ ಮಾಡುವ ಸರಕಾರ ಈ ಕುರಿತು ಹೊಸ ಯೋಜನೆಯನ್ನು ಯಾಕೆ ತರಬಾರದು. ಅದು ಹೆಲ್ಮೆಟ್ ಭಾಗ್ಯ ಅಂತಾ ಸುಮ್ಮನೆ ಹೆಸರು ಕೊಟ್ಟು ಬಿಡೋಣ. ಯಾರು ಬೈಕ್ ಸವಾರರು ಇರುತ್ತಾರೆ ಅವರಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಹೆಲ್ಮೆಟ್ ಪೂರೈಕೆ ಮಾಡಿಕೊಡಿ. ಈಗಾಗಲೇ ನಿಮ್ಮ ಹೆಲ್ಮೆಟ್ ಕಡ್ಡಾಯ ಯೋಜನೆ ಬಂದಾಗಲೇ ಹೆಲ್ಮೆಟ್ ಕಂಪನಿಗಳು ತಲೆ ಕಡಿಯಲು ಕಾದು ಕೂತಿದೆ. ಇದಕ್ಕೊಂದು ನಿಮ್ಮ ಕಡೆಯಿಂದ ಪರಿಹಾರ ಸಿಗಲಿ. ನಿಮ್ಮ ಈ ಬೃಹತ್ ಯೋಜನೆಯನ್ನು ಕಟ್ಟು ನಿಟ್ಟಿನಲ್ಲಿ ಜಾರಿಗೆ ತರುವ ಕೆಲಸ ಮಾಡುವವರು ಪೊಲೀಸ್ ಇಲಾಖೆ. ಯಾರ ತಲೆಯಲ್ಲಿ ಹೆಲ್ಮೆಟ್ ಇಲ್ಲ ಅಂತಾ ಕಣ್ಣು ಬಾಯಿ ಬಿಟ್ಟುಕೊಂಡು ಟ್ರಾಫಿಕ್ ಪೊಲೀಸರು ಕಾಯುವ ಪರಿಸ್ಥಿತಿಯನ್ನು ಈ ಯೋಜನೆಯ ಮೂಲಕ ಮತ್ತೆ ನಿರ್ಮಾಣ ಮಾಡುತ್ತಿದ್ದೀರಿ.

ಮೊದಲೇ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಅವರಿಗೆ ಮೊದಲೇ ಸಾಕಷ್ಟು ಕೆಲಸವಿದೆ. ದಿನನಿತ್ಯನೂ ರಾಜ್ಯದ ಭದ್ರತೆ ಚಿಂತೆ ಅವರಿಗೆ ಕಾಡುತ್ತಾ ಇರುತ್ತದೆ. ಈ ಕೊರತೆಯನ್ನು ಮೊದಲು ನೀಗಿಸಿಕೊಂಡು ಬಿಡಿ. ಎಲ್ಲಕ್ಕೂ ಮುಖ್ಯವಾಗಿ ರಸ್ತೆಗಳನ್ನು ಸರಿಯಾಗಿ ಕೊಟ್ಟು ಬಿಡಿ. ಯಾಕ್ ಅಂದರೆ ನಿಮ್ಮ ರಸ್ತೆಗಳ ಅವ್ಯವಸ್ಥೆಯಿಂದ ಮುಕ್ಕಾಲು ಭಾಗ ಅಪಘಾತಗಳು ನಡೆಯುತ್ತಾ ಇರುತ್ತದೆ. ಮತ್ತಷ್ಟೂ ವಿಚಾರಗಳು ಶ್ರೀಸಾಮಾನ್ಯನಿಗೆ ಬಂದಿದೆ. ಅದೆಲ್ಲವೂ ಇಲ್ಲಿ ಪ್ರಸ್ತಾಪ ಮಾಡೋದಿಲ್ಲ. ಕಾರಣ ಅವನು ಬುದ್ದಿವಂತ ನಿಮ್ಮನ್ನು ನೇರವಾಗಿ ಪ್ರಶ್ನೆ ಮಾಡಿದರೆ ನೀವು ಮಂತ್ರಿ ಎನ್ನುವುದನ್ನು ಮರೆತು ಬಿಡಬಹುದು.