ಜಾಬ್ ಜಂಕ್ಷನ್

ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಗುಜರಾಯಿಸಿ

ಕರ್ನಾಟಕ ಹೈಕೋರ್ಟ್ ಪ್ರಸ್ತುತ ಖಾಲಿ ಇರುವ ಮತ್ತು ಅನುಷಂಗಿಕ ಖಾಲಿ ಹುದ್ದೆಗಳೂ ಸೇರಿದಂತೆ ಒಟ್ಟು ೧೨೪ ಸಿವಿಲ್ ನ್ಯಾಯಾಧೀಶರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಒಟ್ಟು ಹುದ್ದೆಗಳ ಪೈಕಿ ೦೮ ಹುದ್ದೆಗಳನ್ನು ಹೈ-ಕ ಅಭ್ಯರ್ಥಿಗಳಿಗೆ ಮೀಸಡಲಿಡಲಾಗಿದೆ.
ಅರ್ಹತೆಗಳೇನು?
ನೇರನೇಮಕಾತಿ ಭಾರತದಲ್ಲಿನ ಕಾನೂನಿನ ಮೂಲಕ ಸ್ಥಾಪಿತವಾದ ವಿಶ್ವವಿದ್ಯಾಲಯವು ನೀಡಿದ ಕಾನೂನು ಪದವಿ
ಹೊಂದಿರಬೇಕು ಮತ್ತು ಕಡ್ಡಾಯವಾಗಿ ವಕೀಲರಾಗಿ ನೋಂದಣಿ ಆಗಿರಬೇಕು. ಅಭ್ಯರ್ಥಿಗಳ ವಯಸ್ಸು , ಅರ್ಜಿಗಳನ್ನು ಸಲ್ಲಿಸುವುದಕ್ಕೆ
ನಿಗದಿಪಡಿಸಿದ ಕೊನೆಯ ದಿನಾಂಕದಂದು, ಅನುಸೂಚಿತ ಜಾತಿ/ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ
೩೮ ವರ್ಷ ಮತ್ತು ಇತರರಾಗಿದ್ದಲ್ಲಿ ಗರಿಷ್ಠ ೩೫ ವರ್ಷ ಹೊಂದಿರಬೇಕು. ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ
ಮೂರು ವರ್ಷಗಳ ಸಡಿಲಿಕೆ ಇರುತ್ತದೆ.
ಸೇವಾ ನಿರತ ಅಭ್ಯರ್ಥಿಗಳ ನೇಮಕಾತಿ
ಕಾನೂನು ಪದವಿ ಕಡ್ಡಾಯ. ಗರಿಷ್ಠ ವಯೋಮಿತಿ ೪೦ ವರ್ಷ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಾಗಿದ್ದಲ್ಲಿ ೪೩ ವರ್ಷ ಮೀರಿರಬಾರದು.
ಹೈಕೋರ್ಟ್‌ನಲ್ಲಿ ಮತ್ತು ಜಿಲ್ಲಾ ನ್ಯಾಯಿಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಗತ್ಯ ವಿದ್ಯಾರ್ಹತೆ ಹೊಂದಿರುವ ಎಲ್ಲಾ ಸೇವಾನಿರತ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸರ್ಕಾರಿ ಮತ್ತು ಪ್ರಾಸಿಕ್ಯೂಷನ್ಸ್ ವ್ಯಾಜ್ಯ ನಿರ್ವಹಣೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ
ಸರ್ಕಾರಿ-ಪ್ರಾಸಿಕ್ಯೂಟರ್ ಹಾಗೂ ಹೆಚ್ಚುವರಿ ಸರ್ಕಾರಿ ನ್ಯಾಯವಾದಿಗಳೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಜಿ ಶುಲ್ಕ ಎಷ್ಟು?
ಪೂರ್ವಭಾವಿ ಪರೀಕ್ಷೆಗೆ ಹಾಜರಾಗುವಾಗ ಎಸ್‌ಸಿ/ ಎಸ್‌ಟಿ/ಪ್ರವರ್ಗ-೧ಕ್ಕೆ ಸೇರಿದ ಅಭ್ಯರ್ಥಿಗಳು ೨೫೦ ರೂ. ಇತರ ಅಭ್ಯರ್ಥಿಗಳು ೫೦೦ ರೂ. ಶುಲ್ಕ ಪಾವತಿಸಬೇಕು. ಮುಖ್ಯ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಫಲಿತಾಂಶ ಘೋಷಿಸಿದ ೧೫ ದಿನಗಳೊಳಗೆ ಎಸ್‌ಸಿ/ಎಸ್‌ಟಿ ಮತ್ತು
ಪ್ರವರ್ಗ-೧ಕ್ಕೆ ಸೇರಿದವರಾಗಿದ್ದರೆ ೫೦೦ ರೂ. ಮತ್ತು ಇತರರು ೧೦೦೦ ರೂ. ಪಾವತಿಸಬೇಕು.
ನೇಮಕಾತಿ ಪರೀಕ್ಷೆ ಹೇಗಿರುತ್ತದೆ?
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದ್ದು, ಈ ಪರೀಕ್ಷೆಯು ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆ ಎಂಬ
ಮೂರು ಪ್ರಮುಖ ಹಂತಗಳ ಜೊತೆಗೆ ೨೫ ಅಂಕಗಳಿಗೆ ಕಂಪ್ಯೂಟರ್ ಜ್ಞಾನ ಪರೀಕ್ಷೆಯನ್ನೂ ನಡೆಸುತ್ತಾರೆ. ಆದರೆ, ಈ ಪರೀಕ್ಷೆಯ ಅಂಕಗಳನ್ನು ಮೊದಲ ಮೂರು ಹಂತಗಳ ಜೊತೆಗೆ ಸೇರ್ಪಡೆ ಮಾಡುವುದಿಲ್ಲ.
ಪೂರ್ವಭಾವಿ ಪರೀಕ್ಷೆ
೧೦೦ ಅಂಕಗಳಿಗೆ ವಸ್ತುನಿಷ್ಠ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
ಪಠ್ಯಕ್ರಮ: ಸಿವಿಲ್ ಪ್ರಕ್ರಿಯಾ ಸಂಹಿತೆ ೧೯೦೮; ವರ್ಗಾವಣೀಯ ಲಿಖಿತಗಳ ಅಧಿನಿಯಮ, ೧೯೮೧; ಸ್ವತ್ತು ವರ್ಗಾವಣೆ ಅಧಿನಿಯಮ, ೧೮೮೨; ಭಾರತೀಯ
ಕರಾರು ಅಧಿನಿಯಮ, ೧೮೭೨; ನಿರ್ದಿಷ್ಟ ಪರಿಹಾರಗಳ ಅಧಿನಿಯಮ, ೧೯೬೩; ಭಾರತದ ಸಂವಿಧಾನ ಮತ್ತು ಕರ್ನಾಟಕ ಬಾಡಿಗೆ ಅಧಿನಿಯಮ, ೧೯೯೯; ದಂಡ ಪ್ರಕ್ರಿಯಾ ಸಂಹಿತೆ, ೧೯೭೩; ಭಾರತೀಯ ದಂಡಸಂಹಿತೆ, ೧೮೬೦ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ೧೯೭೨; ಮತ್ತು ಸಾಮಾನ್ಯ ಜ್ಞಾನ-ತಾರ್ಕಿಕ ಮತ್ತು ಮನೋಸಾಮರ್ಥ್ಯ ಪರೀಕ್ಷೆ.
ಮುಖ್ಯ ಪರೀಕ್ಷೆ
೧)ಭಾಷಾಂತರ ಪತ್ರಿಕೆ: ಕನ್ನಡದಿಂದ ಇಂಗ್ಲಿಷ್‌ಗೆ ಮತ್ತು ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರ .
೨) ಕಾನೂನು ಪತ್ರಿಕೆ-೧: ಸಿವಿಲ್ ಪ್ರಕ್ರಿಯಾ ಸಂಹಿತೆ, ೧೯೦೮; ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, ೧೯೭೩, ಭಾರತೀಯ
ಸಾಕ್ಷ್ಯ ಅಧಿನಿಯಮ, ೧೮೭೨ ಮತ್ತು ವಾದ ತತ್ವಗಳು ಮತ್ತು ಭಾರತೀಯ ಸಂವಿಧಾನ.
೩) ಕಾನೂನು ಪತ್ರಿಕೆ-೨: ಸಿವಿಲ್ ಪ್ರಕರಣಗಳಲ್ಲಿ ವಿವಾದಾಂಶಗಳನ್ನು ರೂಪಿಸುವುದು ಮತ್ತು ತೀರ್ಪುಗಳನ್ನು
ಬರೆಯುವುದು.
೪)ಕಾನೂನು ಪತ್ರಿಕೆ-೩: ಕ್ರಿಮಿನಲ್ ಪ್ರಕರಣಗಳಲ್ಲಿ ವಿವಾದಾಂಶಗಳನ್ನು ರೂಪಿಸುವುದು ಮತ್ತು ತೀರ್ಪುಗಳನ್ನು
ಬರೆಯುವುದು. ಈ ನಾಲ್ಕೂ ಪತ್ರಿಕೆಗಳಿಗೆ ತಲಾ ೧೦೦ ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.
ಮೌಖಿಕ ಪರೀಕ್ಷೆ
ಇದರಲ್ಲಿ ಅಭ್ಯರ್ಥಿಗಳ ಕಾನೂನು ಗ್ರಹಿಕೆ, ಇದಕ್ಕೆ ಸಂಬಂಧಿ ಸಿದ ಸಾಮಾನ್ಯ ಜ್ಞಾನವನ್ನು ಪರೀಕ್ಷಿಸಲಾಗುತ್ತದೆ. ಇದಕ್ಕೂ
೧೦೦ ಅಂಕಗಳನ್ನು ಮೀಸಲಿಟ್ಟಿದ್ದಾರೆ.
ಜಸ್ಟ್ ನೋಡಿ ಬನ್ನಿ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ೨೦೧೬ರ ಮಾರ್ಚ್ ೦೧
ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನ: ೨೦೧೬ರ ಮಾರ್ಚ್ ೦೪
<www.karnatakajudiciary.kar.nic.in>