ದೊಡ್ಡ ಸುದ್ದಿ ಸಿಟಿ ಸುದ್ದಿ ಹೊಸ ಸುದ್ದಿ

ದುಬಾರಿ ವಾಚ್ ವಿಚಾರದಲ್ಲಿ ಸಿಕ್ಕಿಬಿದ್ದರು ಎಚ್‌ಡಿಕೆ !

ರಾಜ್ಯ ರಾಜಕೀಯ ವಿದ್ಯಮಾನಗಳ ಕೇಂದ್ರಸ್ಥಳ ವಿಧಾನಸೌಧದಲ್ಲಿ ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಧರಿಸಿದ ವಾಚು ಕಳ್ಳತನದ ವಾಚು. ಇದರ ಅಸಲಿ ವಾರಸುದಾರರಾದ ಡಾ. ಸುಧಾಕರ ಶೆಟ್ಟಿ ನನ್ನನ್ನು ಭೇಟಿಯಾಗಿ ಈ ಮಾಹಿತಿ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಆದರೆ ಅದಾಗಿ ಒಂದು ಗಂಟೆ ಕಳೆಯುವ ಮುನ್ನವೇ ಸುಧಾಕರ್ ಶೆಟ್ಟಿ ಇದನ್ನು ಖಂಡಿಸಿದ್ದರು. ಅಲ್ಲದೇ ನಾನು ಹೆಚ್‌ಡಿಕೆಯನ್ನು ಭೇಟಿ ಮಾಡಿಲ್ಲ. ಸಿಎಂ ಕೈಲಿದ್ದ ವಾಚು ನನ್ನದಲ್ಲ. ನನ್ನ ವಾಚು ತುಂಬಾ ಹಳೆಯದು ಎಂದಿದ್ದರು.

ಪರಿಸ್ಥಿತಿ ಉಲ್ಟಾ ಹೊಡೆಯುತ್ತಿರುವುದನ್ನು ಗಮನಿಸಿದ ಹೆಚ್.ಡಿ. ಕುಮಾರಸ್ವಾಮಿ ಯು ಟರ್ನ್ ಹೊಡೆದಿದ್ದು, ಸುದ್ದಿಗೋಷ್ಠಿಯಲ್ಲಿ ಶೆಟ್ಟಿ ಭೇಟಿ ಮಾಡಿದ್ದರು ಎಂದು ಹೇಳಿದ್ದರು. ಆದರೆ ಎರಡು ಗಂಟೆ ತರುವಾಯ ಮಾಧ್ಯಮದವರಿಗೆ ಇಲ್ಲಾ, ನಾನು ಶೆಟ್ಟಿ ಅವರನ್ನು ಭೇಟಿ ಮಾಡಿರಲಿಲ್ಲ. ಅವರ ಆಪ್ತರೊಬ್ಬರು ಬಂದು ಶೆಟ್ಟಿ ನಿಮ್ಮನ್ನು ಭೇಟಿ ಮಾಡಲು ಬಯಸಿದ್ದಾರೆ ಎಂದಿದ್ದರು. ಎರಡು ದಿನದಲ್ಲಿಯೇ ಅವರಿಗೆ ಬೆದರಿಕೆ ಕರೆ ಬಂದು, ಭೇಟಿಗೆ ಹಿಂದೇಟು ಹಾಕಿದ್ದರು. ವಾಚಿನ ವಿಚಾರ ಬಾಯ್ಬಿಟ್ಟರೆ ಜೈಲಿಗಟ್ಟುವ ಬೆದರಿಕೆ ಕೂಡ ಇವರಿಗೆ ಬಂದಿದೆ. ಇದರಿಂದ ಈ ವಾಚಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

ಆತುರಕ್ಕೆ ಬಿದ್ರು ಹೆಚ್‌ಡಿಕೆ

ಈ ಹಿಂದೆಯೂ ಹಲವು ಸಂದರ್ಭಗಳಲ್ಲಿ ಮಾಜಿ ಸಿಎಂ ಹೆಚ್‌ಡಿಕೆ ಆರೋಪ ಮಾಡುವ ಉದ್ದೇಶಕ್ಕೆ ಕೆಲ ವಿಚಾರ ಪ್ರಸ್ತಾಪಿಸಿ ಇಕ್ಕಟ್ಟಿಗೆ ಸಿಲುಕಿದ್ದಿದೆ. ಮತ್ತೆ ಕೆಲ ವಿಚಾರವನ್ನು ಮತ್ತೆ ಪ್ರಸ್ತಾಪಿಸದೇ ಸುಮ್ಮನಾಗಿದ್ದಾರೆ. ಇದರಿಂದ ಈ ಹಿಂದೆ ಸಿಎಂ ಸಿದ್ದರಾಮಯ್ಯ ಒಮ್ಮೆ ಕುಮಾರಸ್ವಾಮಿ ಹಿಟ್ ಅಂಡ್ ರನ್ ಕೇಸ್ ಇದ್ದಂತೆ ಎಂದು ಲೇವಡಿ ಮಾಡಿದ್ದರು. ಅದು ಹಲವು ಸಂದರ್ಭದಲ್ಲಿ ನಿಜವಾಗುತ್ತಿದೆ.

ಕೆಲ ತಿಂಗಳ ಹಿಂದೆ ಆರ್.ವಿ. ದೇಶಪಾಂಡೆ ಕೆರೆ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ದಾಖಲೆ ನೀಡುತ್ತೇನೆ ಎಂದಿದ್ದ ಕುಮಾರಸ್ವಾಮಿ ನಂತರ ಅದನ್ನು ಮರೆತಿದ್ದರು. ಇತ್ತೀಚೆಗೆ ಪಕ್ಷ ಸಂಘಟನೆ ಬದಲು ಈ ರೀತಿ ಆರೋಪಗಳಿಗೆ ಸೀಮಿತವಾಗುತ್ತಿರುವ ಮಾಜಿ ಸಿಎಂ ಒಬ್ಬ ಬ್ಲಾಕ್ ಮೇಲ್ ರಾಜಕಾರಣಿ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಳ್ಳುತ್ತಿದ್ದಾರೆ ಎನ್ನುವ ಗುಸುಗುಸು ವಿಧಾನಸೌಧ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.