ದೊಡ್ಡ ಸುದ್ದಿ ಹೆಲ್ತ್ ಪ್ಲಸ್

ಕರಿದ ತಿಂಡಿಯಿಂದ ಎಣ್ಣೆ ಹೀರಲು ಸುದ್ದಿಪತ್ರಿಕೆಗಳನ್ನು ಬಳಸುವ ಮುನ್ನ ಎಚ್ಚರ!

ಬೋಂಡಾ, ಬಜ್ಜಿ ಇನ್ಯಾವುದೇ ಕರಿದ ತಿಂಡಿಗಳಲಿರಲಿ, ಅದರಲ್ಲಿರುವ ಅಧಿಕ ಎಣ್ಣೆಯನ್ನು ತೆಗೆಯಲು ನಾವು ಸಾಧಾರಣವಾಗಿ ಸುದ್ದಿ ಪತ್ರಿಕೆಯನ್ನು ಬಳಸುತ್ತೇವೆ. ಸುಲಭವಾಗಿ ಕೈಗೆ ಸಿಗುವ ಸುದ್ದಿ ಪತ್ರಿಕೆಯ ತುಂಡೊಂದರ ನಡುವೆ ತಿಂಡಿಯನ್ನಿಟ್ಟು ಅದರಲ್ಲಿದ್ದ ಎಣ್ಣೆಯನ್ನು ಹೀರುವಂತೆ ಮಾಡುತ್ತೇವೆ. ಈ ರೀತಿ ನೀವು ಮಾಡುತ್ತಿದ್ದರೆ ಗಮನಿಸಿ, ತಿಂಡಿಗಳಿಂದ ಯಾವತ್ತೂ ಎಣ್ಣೆಯನ್ನು ಹೀರುವುದಕ್ಕಾಗಿ ಸುದ್ದಿಪತ್ರಿಕೆಗಳನ್ನು ಬಳಸಲೇ ಬೇಡಿ. ಇದು ನಿಮ್ಮ ಆರೋಗ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ಇಲ್ಲಿದೆ ಕಾರಣ.

ಕ್ಯಾನ್ಸರ್

ಸುದ್ದಿಪತ್ರಿಕೆಗಳಲ್ಲಿ ಬಳಸಲ್ಪಡುವ ಶಾಯಿ ದೇಹಕ್ಕೆ ಹಾನಿಕಾರಕ. ತಿಂಡಿಗಳಿಂದ ಎಣ್ಣೆ ತೆಗೆಯಲು ಪತ್ರಿಕೆಗಳನ್ನು ಬಳಸಿದಾಗ ಆ ಶಾಯಿ ತಿಂಡಿಗೆ ಅಂಟಿಕೊಳ್ಳುತ್ತದೆ. ತಿಂಡಿಯ ಮೂಲಕ ಶಾಯಿ ಕೂಡಾ ನಮ್ಮ ದೇಹದೊಳಗೆ ಹೋಗುತ್ತದೆ. ಇದು ಕ್ಯಾನ್ಸರ್‌ನ್ನು ಉಂಟು ಮಾಡಬಲ್ಲದು ಎಂಬುದನ್ನು ಅಲ್ಲಗೆಳೆಯಬೇಡಿ

 

ಕಿಡ್ನಿ ಮತ್ತು ಶ್ವಾಸಕೋಶಕ್ಕೆ ತೊಂದರೆ

ಸುದ್ದಿಪತ್ರಿಕೆಗಳಲ್ಲಿ ಗ್ರಾಫೈಟ್ ಅಂಶವಿದೆ. ಇದು ವಿಷಕಾರಿಯಾಗಿದ್ದು ಕಿಡ್ನಿ ಮತ್ತು ಶ್ವಾಸಕೋಶಕ್ಕೆ ತೊಂದರೆಯನ್ನುಂಟು ಮಾಡುತ್ತದೆ.

ಜೀರ್ಣಾಂಗದ ಮೇಲೆ ಪರಿಣಾಮ

ಇಂಥಾ ವಿಷಕಾರಿ ವಸ್ತುಗಳು ನಮಗೆ ಗೊತ್ತಿಲ್ಲದೆಯೇ ನಮ್ಮ ಹೊಟ್ಟೆಯೊಳಗೆ ಸೇರುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಹಾರ್ಮೋನ್‌ಗಳ ಮೇಲೆಯೂ ಇದು ಪರಿಣಾಮ ಬೀರುತ್ತದೆ.

ನಾವೇನು ಮಾಡಬೇಕು?

ತಿಂಡಿಗಳಿಂದ ಎಣ್ಣೆಯನ್ನು ತೆಗೆಯಲೇ ಬೇಕು ಎಂದಿದ್ದರೆ ಸುದ್ದಿ ಪತ್ರಿಕೆಯ ಬದಲು ಟಿಶ್ಯೂ ಪೇಪರ್‌ಗಳನ್ನು ಬಳಸಿ. ಬಿಳಿ ಖಾಲಿ ಹಾಳೆಗಳನ್ನು ಬಳಸಿ, ಆದರೆ ಯಾವತ್ತೂ ಪ್ರಿಂಟ್ ಇರುವ ಪೇಪರ್‌ಗಳನ್ನು ಬಳಸಲೇ ಬೇಡಿ.