ಸಂಪಾದಕೀಯ

ಸಾವಿನಲ್ಲೂ ಸಾರ್ಥಕತೆ ಕಟ್ಟಿಕೊಟ್ಟ ಬೆಂಗಳೂರು ವಿದ್ಯಾರ್ಥಿ

ಬೆಂಗಳೂರು: ಅನಾರೋಗ್ಯದಿಂದ ಸಾವನ್ನಪ್ಪಿದ ಬಳಿಕ ತನ್ನ ಅಂಗಾಂಗ ದಾನ ಮಾಡುವ ಮೂಲಕ ಬೆಂಗಳೂರಿನ ವಿದ್ಯಾರ್ಥಿಯೊಬ್ಬ ನ್ಯೂಯಾರ್ಕ್ ನಲ್ಲಿ ತನ್ನ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾನೆ.

ನ್ಯೂಯಾರ್ಕ್ ನ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಬೆಂಗಳೂರಿನ ಬೊಮ್ಮಸಂದ್ರ ನಿವಾಸಿ ಆಗಿರುವ ರಾಜೀವ್ ನಾಯ್ಡು ಅಂಗಾಂಗ ದಾನ ಮಾಡಿರುವ ಭಾರತೀಯ ವಿದ್ಯಾರ್ಥಿ.

ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಮಾಸ್ಟರ್ಸ್ ಇನ್ ಇಂಡಸ್ಟ್ರೀಯಲ್ ಎಂಜಿನೀಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದ ರಾಜೀವ್ ಕಳೆದ 26ರಂದು ಶ್ವಾಸಕೋಶದ ಸೋಂಕಿನಿಂದಾಗಿ  ಬ್ರೂಕ್‌ಲಿನ್ ಆಸ್ಪತ್ರೆಗೆ ದಾಖಲಾಗಿದ್ದರು.

ಚಿಕಿತ್ಸೆಯಿಂದ ಚೇತರಿಸಿಕೊಳ್ಳದ ರಾಜೀವ್ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು.  ವೈದ್ಯರಿಂದ ವಿಷಯ ಅರಿತ ಸಂಬಂಧಿಕರು ಅಂಗಾಂಗ ದಾನ ಮಾಡಿದ್ದಾರೆ. ಅನಾರೋಗ್ಯದಿಂದ ರಾಜೀವ್ ಆಸ್ಪತ್ರೆಗೆ ದಾಖಲಾದ ನಂತರ ಅವರ ಸೋದರಿಯ ಗಂಡ ನ್ಯೂಯಾರ್ಕ್‌ಗೆ ಆಗಮಿಸಿ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು.

ರಾಜೀವ್ ಅವರ ಕಿಡ್ನಿ , ಲಿವರ್, ಕಣ್ಣು, ಹೃದಯ ಸೇರಿದಂತೆ ಎಲ್ಲ ಅಂಗಾಂಗಳನ್ನು ದಾನ ಮಾಡಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ರಾಜೀವ್ ಅವರ ಪಾರ್ಥಿವ ಶರೀರವನ್ನು ನ್ಯೂಯಾರ್ಕ್‌ನಿಂದ ನಗರಕ್ಕೆ ತರಲಾಗುತ್ತಿದ್ದು, ನಾಳೆ ಆಗಮಿಸಲಿದೆ ಎಂದು ಹೇಳಲಾಗಿದೆ.

ಕಳೆದ ವರ್ಷ ಆಗಸ್ಟ್ 20 ರಂದು ನ್ಯೂಯಾರ್ಕ್ ಗೆ ತೆರಳಿದ್ದ ರಾಜೀವ್, ಈ ಸೆಮಿಸ್ಟರ್ ನ ಪರೀಕ್ಷೆ ಮುಗಿಸಿ, ಬೇಸಿಗೆ ರಜೆಗಾಗಿ ಬೆಂಗೂರಿಗೆ ಬರಲು ರಾಜೀವ್ ತಯಾರಿ ನಡೆಸಿದ್ದರು, ಮನೆಯವರೆಲ್ಲರೂ ರಾಜೀವ್ ಅವರನ್ನು ಕಾರ್ತಿಕ್ ಎಂದು ಕರೆಯುತ್ತಿದ್ದರು. ಆಷ್ಟರಲ್ಲಿ ವಿಧಿಯ ಆಟವೇ ಬೇರೆಯಾಗಿ ಸಾವನ್ನಪ್ಪಿದ್ದರು.